ಗೌತಮ್ ಗೌಡ ನೇತೃತ್ವದಲ್ಲಿ ಬಿಜೆಪಿ ಸೇರಿದ ಕೊಲೆ ಆರೋಪಿಗಳು?
ರಾಮನಗರ: ಚುನಾವಣೆ ಹೊತ್ತಿನಲ್ಲಿ ರೌಡಿಶೀಟರ್‌ಗಳನ್ನು ಗಡಿಪಾರು ಮಾಡುವುದು ಸಾಮಾನ್ಯ. ಆದರೆ, ಸದ್ಯ ಅಂತಹ ಪಟ್ಟಿಯಲ್ಲಿ ಇರುವವರಲ್ಲಿ ಕೆಲವರು ರಾಜಕೀಯ ಪಕ್ಷಗಳ ಕದ ತಟ್ಟುತ್ತಿದ್ದಾರೆ.
ರಾಮನಗರದ ಬಾಲಗೇರಿಯಲ್ಲಿ ಈಚೆಗೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಗೌತಮ್ ಗೌಡ ನೇತೃತ್ವದಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಇಂತಹ ಇಬ್ಬರು ವ್ಯಕ್ತಿಗಳು ಬಿಜೆಪಿ ಸೇರಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣದ ರೌಡಿಶೀಟರ್ ಆಂಬೊಡೆ ಹತ್ಯೆ ಪ್ರಕರಣದ ಆರೋಪಿ ಹಾಗೂ ಜಡೇಜ ರವಿ ಕೊಲೆ ಪ್ರಕರಣದ ಆರೋಪಿಗೆ ಕೇಸರಿ ಶಾಲು ಹೊದ್ದಿಸಿ ಸ್ವಾಗತ ಮಾಡಲಾಗಿದೆ ಎಂದು ದೂರಲಾಗಿದೆ.
ಬಿಜೆಪಿ ಮುಖಂಡರ ಈ ನಡೆಗೆ ಪಕ್ಷದ ಕೆಲವು ಮುಖಂಡರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಿಸ್ತಿಗೆ ಹೆಸರಾದ ಪಕ್ಷ. ಅಪರಾಧ ಹಿನ್ನೆಲೆ ಇದ್ದವರನ್ನು ಈವರೆಗೆ ಪಕ್ಷಕ್ಕೆ ಬರಮಾಡಿಕೊಂಡಿರಲಿಲ್ಲ. ಆದರೆ, ಸದ್ಯ ಆ ನಿಯಮಗಳನ್ನು ಮೀರಿ ಪಕ್ಷ ಸಂಘಟನೆ ಹೆಸರಿನಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂಬುದು ಬಿಜೆಪಿಯ ಕೆಲವು ಕಾರ್ಯಕರ್ತರ ಆರೋಪ.
ಸೇರ್ಪಡೆ ಇಲ್ಲ: ಈ ಕುರಿತು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಗೌತಮ್ ಗೌಡ ಪ್ರತಿಕ್ರಿಯಿಸಿ, ‘ರವಿ ಎಂಬ ವ್ಯಕ್ತಿ ಕಾರ್ಯಕ್ರಮದಲ್ಲಿ ಓಡಾಡಿಕೊಂಡಿದ್ದು ನಿಜ. ಅವರು ಹಿಂದೂ ಪರ ಸಂಘಟನೆಯೊಂದರಲ್ಲೂ ಗುರುತಿಸಿಕೊಂಡಿದ್ದು, ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಆದರೆ, ಅಪರಾಧ ಹಿನ್ನೆಲೆ ಇರುವ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪೊಲೀಸ್ ಕಣ್ಣು ಅಗತ್ಯ: ಚುನಾವಣೆ ಹೊತ್ತಿನಲ್ಲಿ ಮತದಾರರಿಗೆ ಆಮಿಷ ಒಡ್ಡುವುದು, ಬೆದರಿಕೆ ಹಾಕುವುದು ಸಾಮಾನ್ಯವಾಗಿದೆ. ಎಲ್ಲ ಪಕ್ಷಗಳಲ್ಲೂ ಅಪರಾಧ ಹಿನ್ನೆಲೆ ಉಳ್ಳ ವ್ಯಕ್ತಿಗಳು ಹಾಗೂ ಅವರ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ವಹಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :