ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗಾವಕಾಶದ ಭರವಸೆ ಮೂಡಿಸಬೇಕು : ಡಾ.ಸಿ. ನಂಜುಂಡಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು ಹಾಗೂ ಮೊದಲ ಮೂರು ಸಮ್ಮೇಳನದ ಅಧ್ಯಕ್ಷರಾಗಿದ್ದವರು ಎಚ್.ವಿ. ನಂಜುಂಡಯ್ಯರವರು. ಮೂಲತಃ ತಿಪ್ಪಸಂದ್ರ  ಹೋಬಳಿಯವರು. ಈಗ ಅದೇ ಹೆಸರಿಗೆ ಹೋಲಿಕೆಯಾಗುವ ಡಾ.ಸಿ. ನಂಜುಂಡಯ್ಯ 7ನೇ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಾಗಡಿ : “ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕರ್ನಾಟಕದಲ್ಲಿ  ಉದ್ಯೋಗ ಅವಕಾಶಗಳು ಸಿಗುತ್ತವೆ ಎಂಬ ಭರವಸೆಯನ್ನು ಸರ್ಕಾರಗಳು ಉಂಟು ಮಾಡಬೇಕು. ಕನ್ನಡವನ್ನು ಎಲ್ಲಾ ಹಂತದಲ್ಲೂ ಬಳಸುವಂತೆ ಹಾಗೂ ಸರ್ಕಾರಿ ಶಾಲೆಗಳು ಮುಚ್ಚದಂತೆ ಎಚ್ಚರ ವಹಿಸಬೇಕು. ಯುವ ತಲೆಮಾರು ಅತ್ತ ಬೇರೆ ಭಾಷೆಯನ್ನೂ ಕಲಿಯದೆ, ಇತ್ತ ಮಾತೃಭಾಷೆಯನ್ನೂ ಸರಿಯಾಗಿ ಕಲಿಯದೆ ಎಡಬಿಡಂಗಿತನ ಪ್ರದರ್ಶನ ಮಾಡುತ್ತಿರುವುದು ಉತ್ತಮವಾದ ಬೆಳವಳಿಗೆಯಲ್ಲ“

ಇತಿಹಾಸದ ತೊಟ್ಟಿಲು ಎಂದು ಕರೆಯಲ್ಪಡುವ ನಾಡಪ್ರಭು ಕೆಂಪೇಗೌಡರ ನೆಲದಲ್ಲಿರುವ ತಿಪ್ಪಸಂದ್ರದಲ್ಲಿ  ಮಾ.2 ಮತ್ತು 3ರಂದು ಆಯೋಜನೆಗೊಂಡಿರುವ 7ನೇ ಜಿಲ್ಲಾ  ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಗೌರವಕ್ಕೆ ಪಾತ್ರರಾಗಿರುವ ಡಾ.ಸಿ. ನಂಜುಂಡಯ್ಯ ಅವರ ಸಲಹೆಗಳಿವು.

ಸಂಸ್ಕೃತ ಶಿಕ್ಷಣ ,  ರಾಜ್ಯಶಾಸ ಕುರಿತು ಸ್ನಾತಕೋತ್ತರ ಪದವಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ವಿದ್ಯಾವಾಚಸ್ಪತಿ ಡಿಲಿಟ್ ಪದವಿ ಪಡೆದು ಆದಿಚುಂಚನಗಿರಿಯಲ್ಲಿ ಕಾಲಭೈರವೇಶ್ವರ ಸಂಸ್ಕೃತ ವೇದಾಗಮ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ತರುವಾಯ ಸಂಸ್ಕೃತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿರುವ ಸಾಹಿತ್ಯ ಸಮ್ಮೇಳನಾಧ್ಯಕ್ಷ  ನಂಜುಂಡಯ್ಯ ಅವರೊಂದಿಗೆ ಕನ್ನಡಪ್ರಭ ಪತ್ರಿಕೆಯ ವರದಿಗಾರರಾದ ಗಂ. ದಯಾನಂದ ಅವರು ನಡೆಸಿದ ಸಂದರ್ಶನದ ಆಯ್ದ ಭಾಗ ಹೀಗಿದೆ.

ಪ್ರಶ್ನೆ – ಕನ್ನಡ ಸಾಹಿತ್ಯ ಸಮ್ಮೇಳನಗಳ ನಿಜವಾದ ಆಶಯ ಏನಿರಬೇಕು?

-ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವುದು ಅದೊಂದು ಕನ್ನಡದ ಹಬ್ಬ. ಎಲ್ಲರೂ ಸಂಭ್ರಮದಲ್ಲಿ ಭಾಗವಹಿಸಿ ಕನ್ನಡ ಸಾಕ್ಷಿಪ್ರಜ್ಞೆಗೆ ಕಾರಣೀಭೂತರಾಗುವ ಸಂದರ್ಭವಿದು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೊಳಿಸುವ ಕೆಲಸವನ್ನು ಸರ್ಕಾರಗಳು ಜವಾಬ್ದಾರಿಯುತವಾಗಿ ಮಾಡಬೇಕಾಗಿದೆ. ಕನ್ನಡಪರ ಚಟುವಟಿಕೆಗಳಿಗೆ ಅಧ್ಯತೆ ಕೊಡುವ ಕೆಲಸವಾಗಬೇಕು. ಪ್ರತಿ ಹೋಬಳಿಗಳಲ್ಲಿಯೂ ಕನ್ನಡಭವನಗಳು ನಿರ್ಮಾಣಗೊಳ್ಳಬೇಕಕು

ಪ್ರಶ್ನೆ – ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ಧೋರಣೆಗೆ ಏನು ಹೇಳುತ್ತೀರಿ ?

– ಇದು ತಪ್ಪು. ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳಿಗೆ ಅಸ್ತಿತ್ವ ಇಲ್ಲ ಎಂದು ಕಲ್ಪನೆ ಮಾಡಿಕೊಳ್ಳುವುದೇ ಕಷ್ಟ. ಆದರೆ ಅಂತಹ ಸ್ಥಿತಿ ಏಕೆ ಆಗುತ್ತಿದೆ ಎಂಬುದನ್ನೂ ನೋಡಬೇಕಾಗಿದೆ. ಜನರು ತಮ್ಮ ಮಕ್ಕಳನ್ನು ಕಾನ್ವೆಂಟ್ ಗಳಿಗೆ ಸೇರಿಸುತ್ತಿದ್ದಾರೆ. ಇದರಿಂದಾಗಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಕೊರತೆ ಕಂಡು ಬರುತ್ತಿದೆ.  ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲಿಯೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದರೆ ಕನ್ನಡ ಶಾಲೆಗಳು ಸುಧಾರಿಸುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗಿದೆ.

ಪ್ರಶ್ನೆ – ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಯಿಂದ ಇಂಗ್ಲೀಷ್ ಮಾಧ್ಯಮ ಮಾಡುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ ?

– ಕೇಂದ್ರ ಸರ್ಕಾರವೂ ಕೂಡಾ ಆಯಾಯ ಪ್ರಾದೇಶಿಕ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಮಾಡಬೇಕು ಎಂಬ ನಿಯಮ ಇದೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಈ ನೀತಿಯನ್ನು ಬಿಗಿಗೊಳಿಸದೆ ಇರುವ ಕಾರಣ ಕನ್ನಡ ಮಾಧ್ಯಮವಾಗದೇ ಇರುವುದಕ್ಕೆ ಬಹುದೊಡ್ಡ ಕಾರಣವಾಗಿದೆ. ಇದು ನಿಜಕ್ಕೂ ಆತಂಕ ತರುವ ವಿಷಯವಾಗಿದೆ.

ಪ್ರಶ್ನೆ – ಕನ್ನಡ ಶಾಲೆಗಳ ದುಸ್ಥಿತಿಗೆ ಸರ್ಕಾರಗಳು ಕಾರಣವೆಂದು ಎನಿಸುವುದಿಲ್ಲವೇ?

– ಖಂಡಿತ ಇದು ಚಿಂತನೆಗೊಳಿಸಬೇಕಾದ ಪ್ರಶ್ನೆ. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದರೆ ಉಜ್ಜಲ ಭವಿಷ್ಯವಿದೆ ಎಂಬ ಭರವಸೆಯನ್ನು ಸರ್ಕಾರಗಳು ಮೂಡಿಸಬೇಕು. ಇದಕ್ಕೆ ಪೂರವಾದ ಕಾನೂನನ್ನು ಜಾರಿಗೊಳಿಸಿ ಅದನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸುವ ಕೆಲಸವಾಗುವ ಆಶಾ ಭಾವನೆ ಹುಟ್ಟದೆ ಹೊರತು ಕನ್ನಡ ಶಾಲೆಗಳು ಉಳಿವು ಕಷ್ಟ ಸಾಧ್ಯವಾಗಬಹುದು.

ಪ್ರಶ್ನೆ – ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳ ಪಾತ್ರದ ಬಗ್ಗೆ ನಿಮ್ಮ ನಿಲುವು ?

– ಸಮ್ಮೆಳನಗಳಿಗೆ ಸರ್ಕಾರಗಳ ಬೆಂಬಲ ಬೇಕು. ರಾಜಕಾರಣಿಗೆಳು ಬೇಕಾ ಎಂಬ ವಿಷಯಕ್ಕೆ ಕನ್ನಡಿಗರು ಎಚ್ಚರಗೊಳ್ಳಬೇಕು. ಮತ್ತು ಕನ್ನಡದ ಕೆಲಸಗಳಿಗೆ ಮುಕ್ತವಾಗಿ ಕೈಜೋಡಿಸಬೇಕು. ರಾಜಕಾರಣಿಗಳು ಬಂದರೂ ಅದು ರಾಜಕೀಯ ರಹಿತ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು. ರಾಜಕೀಯದಲ್ಲಿ ಸಾಹಿತ್ಯ ಇರಬೇಕು. ಸಾಹಿತ್ಯದಲ್ಲಿ ರಾಜಕಾರಣ ಇರಬಾರದು.

ಪ್ರಶ್ನೆ – ಯುವ ತಲೆಮಾರಿಗೆ ಏನು ಸಂದೇಶ ನೀಡುತ್ತೀರಿ  ?

– ಇಂದಿನ ಯುವಕರು ಕನ್ನಡ ನನಗೆ ಬರುವುದಿಲ್ಲ ಎಂದು ಹೇಳುವುದು ಹೆಗ್ಗಳಿಕೆ ಎಂದು ಭಾವಿಸಿ, ಬಾರದ ಬಾಷೆಗೆ ನೇತು ಹಾಕಿಕೊಳ್ಳುತ್ತಿದ್ದಾರೆ. ಇದರಿಂದ ಇಂಗ್ಲೀಷನ್ನೂ ಸರಿಯಾಗಿ ಕಲಿಯದೆ, ಕನ್ನಡವನ್ನೂ ಕಲಿಯದೆ ಎಡಬಿಡಂಗಿಗಳು ಆಗುತ್ತಿದ್ದಾರೆ. ಇದನ್ನು ತಪ್ಪಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆ ಆಗಬೇಕಾಗಿದೆ.

ಪ್ರಶ್ನೆ – ರಾಮನಗರ ಜಿಲ್ಲಾ ಪ್ರಸ್ತುತ ಸಾಹಿತ್ಯದ ಬೆಳವಣಿಗೆ ಬಗ್ಗೆ ನಿಮ್ಮ ಅನಿಸಿಕೆ ?

– ಈಗಿನ ಸಾಹಿತ್ಯ ಹಿಂದಿನಷ್ಟು ಶ್ರೀಮಂತವಾಗಿಲ್ಲ. ಇಲ್ಲಿ ಸಾಹಿತ್ಯ ಬೆಳವಣಿಗೆಗೆ ಅನುಕೂಲ ವಾತಾವರಣ ಇದೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ದುಡಿಸಿಕೊಳ್ಳುವವರು ಹೆಚ್ಚಿನ ಮಟ್ಟದಲ್ಲಿ ಅಧ್ಯಯನಶೀಲರಾಗಬೇಕು.

ಪ್ರಶ್ನೆ – ಸಮ್ಮೆಳನಾಧ್ಯಕ್ಷರಾಗಿರುವ ತಮ್ಮ ಸುಂದರ ಕ್ಷಣಕ್ಕೆ ಚುಂಚನಗಿರಿ ಶ್ರೀಗಳಿಗೆ ಆಹ್ವಾನ ಮಾಡದಿರುವ ಕೊರತೆ ಕಾಡುತ್ತಿದೆಯೇ ?

– ನನಗೂ ಕೂಡಾ ಈ ಭಾವ ಮೂಡಿಬಂದಿತು. ಇದನ್ನು ಕಾರ್ಯಕ್ರಮ ಆಯೋಜಕರಲ್ಲಿಯೂ ಪ್ರಸ್ತಾಪಿಸಿದೆ. ಬಹುಶಃ ಕಾರ್ಯಕ್ರಮದ ಸಿದ್ದತೆಗೆ ಬಹಳ ಕಡಿಮೆ ದಿನಗಳು ಇದ್ದ ಕಾರಣ, ಅವರುಗಳನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎನಿಸುತ್ತಿದೆ. ಆದರೆ ನಾನು ಮಠಕ್ಕೆ ಹೋಗಿ ಅವರಿಗೆ ಪತ್ರಿಕೆ ತಲುಪಿಸಿ ಆಶೀರ್ವಾದ ಪಡೆದು ಬಂದಿದ್ದೇನೆ.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *