ಅರ್ಚಕರಹಳ್ಳಿ ಬಳಿಯ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಮಾರ್ಚ್ 20 ರೊಳಗೆ ಶಂಕು ಸ್ಥಾಪನೆ
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ 5.20 ಎಕರೆ ಜಾಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 550 ಹಾಸಿಗೆಗಳ ಸಾಮಥ್ರ್ಯದ ಸೂಪರ್ ಸ್ಪೆμÁಲಿಟಿ ದರ್ಜೆಯ ಜಿಲ್ಲಾಸ್ಪತ್ರೆ ಆಸ್ಪತ್ರೆ ಗುರುವಾರ ಲೋಕಾರ್ಪಣೆಗೊಂಡಿತು.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಆಸ್ಪತ್ರೆಯ ಲೋಕಾರ್ಪಣೆ ಮಾಡಿದರು. ಜತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ, ಶಾಸಕರೂ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ ಇದ್ದರು.
ಇದಕ್ಕೂ ಮುನ್ನ, ಟೊಯೋಟಾ ಕಂಪನಿಯು ಬಿಡದಿಯಲ್ಲಿ 13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸಮುದಾಯ ಆರೋಗ್ಯ ಕೇಂದ್ರವನ್ನೂ ಉದ್ಘಾಟಿಸಲಾಯಿತು.
270 ಎಕರೆಯಲ್ಲಿ ಆರೋಗ್ಯ ವಿವಿ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಮಾತನಾಡಿ, “ಬೆಂಗಳೂರಿನಲ್ಲಿ ಇರುವ ರಾಜೀವ್ ಗಾಂಧಿ ಆರೋಗ್ಯ ವಿವಿ ಕೇಂದ್ರ ಕಚೇರಿ ಇಲ್ಲಿನ ಅರ್ಚಕರಹಳ್ಳಿ ಬಳಿಗೆ ಸ್ಥಳಾಂತರ ಆಗಲಿದೆ. ಇದಕ್ಕಾಗಿ 270 ಎಕರೆ ಗುರುತಿಸಿದ್ದು, ಇದರಲ್ಲಿ 260 ಎಕರೆ ಸ್ವಾಧೀನ ಮುಗಿದಿದೆ” ಎಂದರು.
ಆರೋಗ್ಯ ವಿವಿ ಕ್ಯಾಂಪಸ್ಸಿನಲ್ಲೇ 750 ಹಾಸಿಗೆಗಳ ವೈದ್ಯಕೀಯ ಕಾಲೇಜು ಕೂಡ ಬರಲಿದೆ. ಇದಕ್ಕಾಗಿ 600 ಕೋಟಿ ರೂ. ವಿನಿಯೋಗಿಸಲಾಗುತ್ತಿದ್ದು, ಈಗಾಗಲೇ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ನುಡಿದರು.
ರಾಮನಗರದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗಳ ಉಪಕೇಂದ್ರಗಳೂ ಬರಲಿವೆ. ಇದನ್ನು ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆ ಮಾದರಿ ಇಟ್ಟುಕೊಂಡು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಸ್ವತಃ ವೈದ್ಯಕೀಯ ಪದವೀಧರನಾದ ನಾನು ಈ ಆಸ್ಪತ್ರೆಯ ಪುನರ್ ವಿನ್ಯಾಸ ಮಾಡುವಲ್ಲಿ ಮತ್ತು ಇದನ್ನು ಮೇಲ್ದರ್ಜೆಗೇರಿಸುವಲ್ಲಿ ಆಸಕ್ತಿವಹಿಸಿದೆ. ಮಣಿಪಾಲ ಆಸ್ಪತ್ರೆಯ ಪರಿಣತರನ್ನು ಇಲ್ಲಿಗೆ ಕರೆಸಿ ಪುನರ್ ವಿನ್ಯಾಸ ಮಾಡಿಸಿದೆ ಎಂದು ಉಸ್ತುವಾರಿ ಸಚಿವರು ವಿವರಿಸಿದರು.
ರೇಷ್ಮೆನಗರಿಯು ‘ಆರೋಗ್ಯನಗರ’ ವಾಗಿಯೂ ಬೆಳೆಯಲಿದೆ. ಈ ಹೈಟೆಕ್ ಆಸ್ಪತ್ರೆಯಿಂದಾಗಿ ಜಿಲ್ಲೆಯ ಜನರು ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ. ಮಾಗಡಿ ತಾಲ್ಲೂಕಿನ ಸಂಕೀಘಟ್ಟದಲ್ಲಿ ಸ್ಥಾಪಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು ಇಡೀ ದೇಶಕ್ಕೆ ಮಾದರಿಯಾಗಿದೆ. ಎಂದರು.
ಈ ಸಂದರ್ಭದಲ್ಲಿ ಸಚಿವ ಡಿ. ಸುಧಾಕರ್ ಮಾತನಾಡಿ, “ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ ಎಚ್ ಎಂ) ಯೋಜನೆಯಡಿ ಈ ಆಸ್ಪತ್ರೆ ಸ್ಥಾಪನೆಯಾಗಿದೆ. ಸದ್ಯ, 250 ಹಾಸಿಗೆಗಳ ಸಾಮಥ್ರ್ಯಕ್ಕೆ ಇಲ್ಲಿ ಸಿಬ್ಬಂದಿ ವ್ಯವಸ್ಥೆ ಇದೆ. ಶೀಘ್ರವೇ ಪೂರ್ಣ ಸಾಮಥ್ರ್ಯಕ್ಕೆ ಬೇಕಾಗುವ ಸಿಬ್ಬಂದಿ ನೇಮಿಸಲಾಗುವುದು ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಮಾರ್ಚಿ 20ರ ಒಳಗೆ ಶಂಕುಸ್ಥಾಪನೆ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಸಂಸದ ಡಿ.ಕೆ ಸುರೇಶ್ ಮಾತನಾಡಿ, ಇಲ್ಲಿ ಈ ಆಸ್ಪತ್ರೆ ನಿರ್ಮಾಣವಾಗುವಲ್ಲಿ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳೂ ಪರಸ್ಪರ ಸಹಕಾರದಲ್ಲಿ ಕೆಲಸ ಮಾಡಿದ್ದೇವೆ. ಈ ಪ್ರಾಜೆಕ್ಟ್ ಕೈ ತಪ್ಪಿ ಹೋಗುವುದರಲ್ಲಿತ್ತು. ಆದರೆ ವೆಂಕಯ್ಯ ನಾಯ್ಡು ಮತ್ತು ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರ ಕಾಳಜಿಯಿಂದಾಗಿ ಆಸ್ಪತ್ರೆ ನಿರ್ಮಾಣ ಸಾಧ್ಯವಾಯಿತು ಎಂದರು.
ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ನಗರದಲ್ಲಿ ಒಂದು ಟ್ರಾಮಾ ಕೇರ್ ಸೆಂಟರ್ ನಿರ್ಮಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ಶಾಸಕ ಕುಮಾರಸ್ವಾಮಿ ಅವರು, ಮೊದಲಿಗೆ ನಾನು ಸಂಸದನಾಗಿದ್ದಾಗ ಈ ಆಸ್ಪತ್ರೆಗಾಗಿ 30 ಕೋಟಿ ರೂ. ಮಂಜೂರಾಯಿತು. ಆದರೆ ಸೂಕ್ತ ಜಾಗ ಸಿಗುವುದಕ್ಕೆ ಆದ ತೊಂದರೆ ಮತ್ತಿತರ ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು. ಅಂತಿಮವಾಗಿ, ಜನಪ್ರತಿನಿಧಿಗಳೆಲ್ಲರ ಮುತುವರ್ಜಿಯಿಂದಾಗಿ ಜಿಲ್ಲೆಯ ಬಹುವರ್ಷಗಳ ಬೇಡಿಕೆ ಈಡೇರಿರುವುದು ಸಂತಸದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅನಿತಾ ಕುಮಾರಸ್ವಾಮಿ, ಮಂಜುನಾಥ್, ಎಂಎಲ್ಸಿಗಳಾದ ಸಿ.ಎಂ.ಲಿಂಗಪ್ಪ, ಅ.ದೇವೇಗೌಡ, ರವಿ ಉಪಸ್ಥಿತರಿದ್ದರು.
ಜೆಡಿಎಸ್ ಕಾರ್ಯಕರ್ತರಿಂದ ಗೊಂದಲ, ತಿಳಿಗೊಳಿಸಿದ ಕುಮಾರಸ್ವಾಮಿ:
ಆಸ್ಪತ್ರೆ ಲೋಕಾರ್ಪಣೆಗೊಂಡ ಹಂತದಲ್ಲಿ ಜೆಡಿಎಸ್ ಕಾರ್ಯಕರ್ತರು ಎಚ್ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿಯವರ ಅನುಪಸ್ಥಿತಿಯಲ್ಲಿ ಉದ್ಘಾಟಿಸಲಾಗಿದೆದ ಎಂದು ಆಕ್ಷೇಪ ಎತ್ತಿದರು. ಈ ಹಂತದಲ್ಲಿ ಕೆಲವರು ‘ಮೋದಿ, ಮೋದಿ’ ಎಂದು ಘೋಷಣೆ ಕೂಗಿದರೆ, ಇನ್ನು ಕೆಲವರು, ‘ಎಚ್ ಡಿ ಕೆ, ಎಚ್ ಡಿ ಕೆ’ ಎಂದು ಘೋಷಣೆ ಕೂಗಿದರು. ಆದರೆ, ಖುದ್ದು ಕುಮಾರಸ್ವಾಮಿ ಹೇಳಿಕೆ ನೀಡಿ, “ನಾನು ಸ್ವಲ್ಪ ತಡವಾಗಿ ಬರುತ್ತೇನೆ. ನೀವು ಉದ್ಘಾಟನೆ ನೆರವೇರಿಸಿರಿ ಎಂದು ಸಚಿವರಿಗೆ ಹೇಳಿದ್ದೆ” ಎಂದು ಸ್ಪಷ್ಟಪಡಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರೆಲ್ಲರೂ ಆಸ್ಪತ್ರೆ ನಿರ್ಮಾಣದಲ್ಲಿ ಪ್ರತಿಯೊಬ್ಬರ ಕೊಡುಗೆ ಇರುವುದನ್ನು ಪ್ರಸ್ತಾಪಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.
ಆಸ್ಪತ್ರೆ ನಿರ್ಮಾಣದಲ್ಲಿ ಭಾಗಿಯಾದ ಪ್ರಮುಖ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಪೇಟಾ ತೊಡಿಸಿ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು.