ಜಾನಪದ ಲೋಕದಲ್ಲಿ ಸಂಶೋಧನಾ ಕೇಂದ್ರ : ಡಾ.ಸಿ.ಎನ್. ಅಶ್ವತ್ಥನಾರಾಯಣ

ರಾಮನಗರ : ಜಾನಪದ ಲೋಕದಲ್ಲಿ ರಾಜ್ಯ ಜಾನಪದ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರ ತೆರೆಯಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಕ‌ರ್ನಾಟಕ ಜಾನಪದ ಪರಿಷತ್ತು ಆಶ್ರಯದಲ್ಲಿ ಇಲ್ಲಿನ ಜಾನಪದ ಲೋಕದಲ್ಲಿ ಬುಡಕಟ್ಟು ಜಾನಪದ ಲೋಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಲಾತಲಾಂತರದಿಂದ ಬಂದಿರುವ ಈ ಸಂಸ್ಕೃತಿ ಉಳಿಸುವುದು ಬಹುದೊಡ್ಡ‌ ಕೆಲಸ. ಸರ್ಕಾರ ಜಾನಪದ ಪರಿಷತ್ತಿಗೆ ಸಿಗಬೇಕಾದ ಆದ್ಯತೆ ಕೊಡಲು ಆಗಿಲ್ಲ. ಆದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಜಾನಪದರು ತಯಾರಿಸಿದ ಉತ್ಪನ್ನಗಳಿಗೆ ಬಹುಮಟ್ಟ ಮಾರುಕಟ್ಟೆ ಇದೆ‌. ಪ್ರವಾಸೋದ್ಯಮಕ್ಕೂ ವಿಫುಲ ಅವಕಾಶ ಇವೆ. ಅದನ್ನು ಬಳಸಿಕೊಳ್ಳಲು ಅಗತ್ಯವಾದ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರಿನ ರಾಮಯ್ಯ ಕಾಲೇಜು ಸಮೀಪ ಜಾನಪದ ಪರಿಷತ್ತಿಗೆ ಸೇರಿದ 30 ಗುಂಟೆ ಸಿ.ಎ. ನಿವೇಶನವನ್ನು ಲಪಟಾಯಿಸಲು ಸಂಚು ನಡೆದಿತ್ತು. ಆ ಜಾಗವನ್ನು ಉಳಿಸಿಕೊಡಲಾಗಿದೆ. ಅಲ್ಲಿ ಪರಿಷತ್ತು ಕಚೇರಿ ತಲೆ ಎತ್ತಲಿ ಎಂದು ಆಶಿಸಿದರು.

ಜಾನಪದ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ, ನಾಗೇಗೌಡ ಜನ್ಮದಿನದ ಅಂಗವಾಗಿ ಲೋಕೋತ್ಸವ ನಡೆಯುತ್ತ ಬಂದಿದೆ. 1994ರಲ್ಲಿ ಈ ಲೋಕ ಲೋಕಾರ್ಪಣೆಗೊಂಡಿದ್ದು, ಜನಪದರ ಕಾಶಿಯಾಗಿ ಬೆಳೆಯುತ್ತ ಬಂದಿದೆ. ಜನಪದದ ಉಳಿವಿಗೆ ಪ್ರಾತಿನಿಧಿಕ ಸಂಸ್ಥೆಯಾಗಿ ಯಶಸ್ಸು ಕಂಡಿದೆ. ನಾಗೇಗೌಡರು ದಾರ್ಶನಿಕರಂತೆ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಜಾನಪದ ಲೋಕದಲ್ಲಿ ನಿರ್ಮಾಣ ಆಗಿರುವ ಗಿರಿಜನ‌ ಲೋಕವು ಪ್ರವಾಸಿಗರನ್ನು ಆಕರ್ಷಿಸಲಿದೆ. ಹಾಗೆಯೇ ವೀಡಿಯೊಸ್ಕೋಪ್ ಪುನರಾರಂಭ ಕೂಡ ಉತ್ತಮ ಕೆಲಸ ಎಂದು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಮಾತನಾಡಿ ‘ಐಎಎಸ್ ಅಧಿಕಾರಿಗಳು ಐಶಾರಾಮಿ ಮನೆ ಕಟ್ಟಿಕೊಂಡು ಆರಾಮವಾಗಿ ಇದ್ದ ಕಾಲದಲ್ಲಿ ನಾಗೇಗೌಡರು ಮನೆಯನ್ನೇ ಮಾರಿ ವಸ್ತು ಸಂಗ್ರಹಾಲಯ ಮಾಡಿದರು. ದೇಶದಲ್ಲೇ ಮೊದಲ ಬಾರಿಗೆ ಜಾನಪದ ಅಕಾಡೆಮಿ‌ ಮಾಡಿ, ವೇದಿಕೆಯಲ್ಲಿ ಜಾನಪದ ಕಲಾವಿದರಿಗೆ ಅವಕಾಶ ಕಲ್ಪಿಸಿದ್ದು ಅವರೇ. ಜಾನಪದ ಲೋಕವನ್ನು ತಪಸ್ದಿನ ರೀತಿಯಲ್ಲಿ ಕಟ್ಟಿ ಬೆಳೆಸಿದ್ದಾರೆ. ನೂರಾರು ಧ್ವನಿ, ದಾಟಿಯ ಜನಪದ ಗೀತೆಗಳ ಸಂಗ್ರಹ ಇಲ್ಲಿ ಮಾತ್ರ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಈ ಲೋಕ ಮಾದರಿ ಆಗಿದೆ’ ಎಂದರು.

ಕರ್ನಾಟಕದಲ್ಲಿ ವಿಶೇಷ ಬಗೆಯ 33 ಬುಡಕಟ್ಟುಗಳು ಇವೆ. ಅದರಲ್ಲಿ ಆಯ್ದ ಐದು ಬುಡಕಟ್ಟುಗಳ ಸಂಸ್ಕೃತಿ ಬಿಂಬಿಸುವ ಗಿರಿಜನ ಲೋಕ ಇಂದು ಅನಾವರಣಗೊಂಡಿದೆ. ಪ್ರವಾಸೋದ್ಯಮದ ಮುಂದುವರಿದ ಭಾಗವಾಗಿ ಜಾನಪದ ಲೋಕವನ್ನು ಮುಂದುವರಿಸಬೇಕಿದೆ ಎಂದು ಆಶಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್‌.ಎಲ್‌. ನಾಗೇಗೌಡರ ಪುತ್ರಿ ಶಾಂತ ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದ್ಮಶ್ರೀ ಪುರಸ್ಕೃತ ತಮಟೆ ಕಲಾವಿದ ಮುನಿವೆಂಕಟಪ್ಪ, ಕಲ್ಪನಾ ನಂಜರಾಜ್, ಆಡಳಿತ ಮಂಡಳಿ ಸದಸ್ಯೆ ಸುಜಾತಾ ಮತ್ತಿತರರು ಇದ್ದರು. ಪರಿಷತ್ತಿನ ಮ್ಯಾನೇಜಿಂಗ್‌ ಟ್ರಸ್ಟಿ ಆದಿತ್ಯ ನಂಜರಾಜ್‌ ವಂದಿಸಿದರು.

ಕರಕುಶಲ ಮೇಳ: ಗಿರಿಜನ ಲೋಕ ಅನಾವರಣ

ಲೋಕೋತ್ಸವದ ಅಂಗವಾಗಿ ಜಾನಪದ ಲೋಕದ ಆವರಣದಲ್ಲಿ ಆಯೋಜಿಸಿದ್ದ ಕರಕುಶಲ ಮೇಳವು ಗಮನ ಸೆಳೆಯಿತು. ಸ್ಥಳೀಯವಾಗಿ ತಯಾರಾದ ವಿವಿಧ ಉತ್ಪನ್ನಗಳು, ಆಹಾರ ಪದಾರ್ಥಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಮೇಳವನ್ನು ತಮಟೆ ಕಲಾವಿದ ಮುನಿವೆಂಕಟಪ್ಪ ಉದ್ಘಾಟಿಸಿದರು.

ಜಾನಪದ ಲೋಕದ ಕೊನೆಯ ಭಾಗದಲ್ಲಿ ನಿರ್ಮಿಸಲಾದ ಗಿರಿಜನ ಲೋಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಇದೇ ವೇಳೆ ಅನಾವರಣಗೊಳಿಸಿದರು. ಜಾನಪದ ಲೋಕದ ಆವರಣದಲ್ಲಿ ನಿರ್ಮಿಸಲಾದ ಹೆರಗನಹಳ್ಳಿ ಅಮ್ಮನವರ ದೇವಸ್ಥಾನ, ಗಂಗಾಧರೇಶ್ವರ ದೇವಸ್ಥಾನಗಳು ಉದ್ಘಾಟನೆಗೊಂಡವು. ಸಂಜೆ ಹುಲಿಕಲ್‌ ನಟರಾಜು ಅವರಿಂದ ಕೆಂಡ ಹಾಯುವ ಪ್ರಾತ್ಯಕ್ಷಿಕೆ ಕಾರ್ಯಕ್ರಮವೂ ನಡೆಯಿತು. ಸಂಜೆ ಲೋಕ ಸರೋವರದಲ್ಲಿ ತೆಪ್ಪೋತ್ಸವ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು

ಲೋಕೋತ್ಸವ ಅಂಗವಾಗಿ ಶನಿವಾರ ದಿನವಿಡೀ ಜಾನಪದ ಕಲಾತಂಡಗಳು ಪ್ರಸ್ತುತಪಡಿಸಿದ ಕಲಾ ಪ್ರದರ್ಶನಗಳು ನೋಡುಗರ ಮೈ ನವಿರೇಳಿಸಿದವು.

ಬೆಳಿಗ್ಗೆ ಕಾರ್ಯಕ್ರಮದ ಉದ್ಘಾಟನೆಗೆ ಮುನ್ನ ಹಾಗೂ ನಂತರ ಪ್ರವೇಶ ದ್ವಾರದ ಬಳಿ ನಾಡಿನ ವಿವಿಧ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ಡೊಳ್ಳು ಕುಣಿತ, ಕೀಲುಕುದುರೆ, ಚಿಲಿಪಿಲಿ ಗೊಂಬೆ, ಪಾಳೇಗಾರ ಹುಲಿವೇಷ, ಕೋಲೆ ಬಸವ, ಗೊರವರ ಕುಣಿತ, ಪೂಜಾ ಕುಣಿತ, ಕಾಡುಗೊಲ್ಲರ ಕುಣಿತ, ಮಹಿಳಾ ವೀರಗಾಸೆ ತಂಡಗಳು ಪ್ರದರ್ಶನ ನೀಡಿದವು. ರಾತ್ರಿ ಮುಖ್ಯ ವೇದಿಕೆಯಲ್ಲೂ ಕಲಾ ತಂಡಗಳಿಂದ ಪ್ರದರ್ಶನ ನಡೆಯಿತು.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *