ಬೆಂಗಳೂರು–ಮೈಸೂರು ದಶಪಥ ಉದ್ಘಾಟನೆಗೆ ಕ್ಷಣಗಣನೆ ; 3 ಲಕ್ಷ ಜನ ಸೇರುವ ನಿರೀಕ್ಷೆ
ಮಂಡ್ಯ : ಬಹು ನಿರೀಕ್ಷಿತ ಬೆಂಗಳೂರು– ಮೈಸೂರು ದಶಪಥ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಮಾರ್ಚ್ 12) ಚಾಲನೆ ನೀಡಲಿದ್ದಾರೆ. ಅದಕ್ಕೂ ಮೊದಲು ನಗರದಲ್ಲಿ 1.8 ಕಿ.ಮೀ ದೂರ ರೋಡ್ ಶೋ ನಡೆಸಲಿದ್ದಾರೆ.
ಪ್ರಧಾನಿ ಸ್ವಾಗತಕ್ಕೆ ಸಕ್ಕರೆ ನಗರ ಮಂಡ್ಯ ಸಜ್ಜಾಗಿದ್ದು ಬೀದಿಬೀದಿಗಳಲ್ಲಿ ಕೇಸರಿ ಧ್ವಜ, ಬ್ಯಾನರ್, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ರೋಡ್ ಶೋ ನಡೆಸುವ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಕೇಸರಿಮಯವಾಗಿದ್ದು ಎಲ್ಲೆಡೆ ಪ್ರಧಾನಿಯ ಭಾವಚಿತ್ರ ಅಳವಡಿಸಲಾಗಿದೆ. ಪ್ರಧಾನಿ ಸಂಚರಿಸುವ ಮಾರ್ಗವನ್ನು ಅಲಂಕಾರ ಮಾಡಲಾಗಿದ್ದು 4 ಕಡೆ ವಿಶೇಷ ದ್ವಾರಗಳನ್ನು ರೂಪಿಸಲಾಗಿದೆ.
ಬೆಳಿಗ್ಗೆ 11.10ಕ್ಕೆ ಪ್ರಧಾನಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ನಂತರ ಹೆಲಿಕಾಪ್ಟರ್ ಮೂಲಕ ನಗರದ ಜನತಾ ಶಿಕ್ಷಣ ಸಂಸ್ಥೆಯ ಕ್ರೆಕೆಟ್ ಸ್ಟೇಡಿಯಂನಲ್ಲಿ ರೂಪಿಸಲಾಗಿರುವ ಹೆಲಿಪ್ಯಾಡ್ ತಲುಪಲಿದ್ದಾರೆ. ನಂತರ ಬೆಳಿಗ್ಗೆ 11.35ಕ್ಕೆ ನಗರದ ಪ್ರವಾಸಿ ಮಂದಿರದ ಮುಂಭಾಗದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೋಡ್ ಶೋ ಆರಂಭವಾಗಲಿದೆ.
ಕೋರ್ಟ್ ಸರ್ಕಲ್, ಜೆ.ಸಿ ವೃತ್ತ, ಮಹಾವೀರ ವೃತ್ತದ ಮೂಲಕ ಸಂಚರಿಸಲಿರುವ ರೋಡ್ ಶೋ ನಂದಾ ಟಾಕೀಸ್ ಬಳಿ ಕೊನೆಗೊಳ್ಳಲಿದೆ. 1.8 ಕಿ.ಮೀ ಮಾರ್ಗದಲ್ಲಿ 40 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ರಸ್ತೆಯ ಎರಡೂ ಕಡೆ ಜನರ ನಿಯಂತ್ರಣಕ್ಕೆ ಬ್ಯಾರಿಕೇಡ್ ಹಾಕಲಾಗಿದೆ.
ನಂತರ ಅಮರಾವತಿ ಹೋಟೆಲ್ ಮುಂಭಾಗದಲ್ಲಿ ದಶಪಥ ಪ್ರವೇಶ ಮಾಡಲಿದ್ದಾರೆ. ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಸಮೀಪದ ಕಟ್ಟೆದೊಡ್ಡಿ ಬಳಿ ದಶಪಥ ಉದ್ಘಾಟನೆಗೆ ಸ್ಥಳ ನಿಗದಿ ಮಾಡಲಾಗಿದೆ. ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಹೆದ್ದಾರಿಯಲ್ಲಿ 50 ಮೀಟರ್‌ಗಳವರೆಗೆ ಹೆಜ್ಜೆ ಹಾಕಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ನಡಿಗೆಗೆ ಜಾನಪದ ಕಲಾ ತಂಡಗಳು ಸಾಥ್ ನೀಡಲಿವೆ.
ನಂತರ ಮಧ್ಯಾಹ್ನ 12.05ಕ್ಕೆ ಗೆಜ್ಜಲಗೆರೆ ಕಾಲೊನಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಎಲ್ಲೆಡೆ ಕಟ್ಟೆಚ್ಚರ: ನಗರದಿಂದ ಗೆಜ್ಜಲಗೆರೆ ಕಾಲೊನಿವರೆಗೆ ವಿವಿಧ ಜಿಲ್ಲೆಗಳಿಂದ ಬಂದಿರುವ 2.5 ಸಾವಿರ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಮುಖ ಬೀದಿಗಳ ಅಂಗಡಿ ಮುಂಗಟ್ಟು ಮುಚ್ಚುವಂತೆ ಸೂಚಿಸಲಾಗಿದೆ. ಪ್ರಧಾನ ಮಂತ್ರಿಗಳ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಸಿಬ್ಬಂದಿ 2 ದಿನಗಳ ಹಿಂದೇ ಬಂದಿದ್ದು ನಗರದಾದ್ಯಂತ ಸಂಚರಿಸಿ ಪರಿಶೀಲನೆ ನಡೆಸಿದ್ದಾರೆ.
‘ನಗರದಾದ್ಯಂತ ಅಪರಿಚಿತ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ. ಹೋಟೆಲ್‌ಗಳಲ್ಲಿ ತುಂಗುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :