ಕನ್ನಡ ಪ್ರೀತಿ ಎಂದರೆ ಇತರ ಭಾಷೆ ಕಲಿಯದಿರುವುದು ಅಥವಾ ದೂಷಿಸುವುದಲ್ಲ : ಸೀಬನಹಳ್ಳಿ ಪಿ. ಸ್ವಾಮಿ

ಸಿಂ.ಲಿಂ.ನಾಗರಾಜು ವೇದಿಕೆ : ಕನ್ನಡದ ಮಕ್ಕಳು ಮಾತೃಭಾಷೆಯಲ್ಲಿ ಪ್ರವೀಣರಾಗದೆ ಪರಿತಪಿಸುವಂತಾಗಿದೆ ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸೀಬನಹಳ್ಳಿ ಪಿ.ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಚನ್ಪಪಟ್ಟಣದ ಶತಮಾನೋತ್ಸವ ಭವನದಲ್ಲಿ ಕಸಾಪ ತಾಲ್ಲೂಕು ಘಟಕದ ವತಿಯಿಂದ ನಡೆದ 6ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.

ಪೋಷಕರು ಮಕ್ಕಳನ್ನು ಯಾವ ಮಾಧ್ಯಮಕ್ಕಾದರೂ ಸೇರಿಸಲಿ. ಆದರೆ, ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಮಕ್ಕಳಿಗೆ ಕನ್ನಡದ ಪುಸ್ತಕ, ಪತ್ರಿಕೆ ಓದುವಂತೆ ಅಭ್ಯಾಸ ಮಾಡಿಸುವ ಅವಶ್ಯ ಇದೆ ಎಂದರು.

ಕನ್ನಡ ಪ್ರೀತಿ ಎಂದರೆ ಇತರ ಭಾಷೆ ಕಲಿಯದಿರುವುದು ಅಥವಾ ದೂಷಿಸುವುದು ಅಲ್ಲ. ಬದಲಿಗೆ ಕನ್ನಡ ಉಸಿರಾಡುವುದು. ಇತರ ಭಾಷಿಕರನ್ನು ಕನ್ನಡ ಪ್ರೀತಿಯಿಂದ ಒಲಿಸಿಕೊಂಡು ಕನ್ನಡದ ಹಿರಿಮೆ ಮನದಟ್ಟು ಮಾಡೋಣ. ಮನಸ್ಸು ಒಂದು ಮಾಡುವ ಕೆಲಸ ಮಾಡೋಣ ಎಂದರು.

ಭಾಷೆ ಜತೆಗೆ ಜನರನ್ನು ಅನೇಕ ಜ್ವಲಂತ ಸಮಸ್ಯೆಗಳು ಕಾಡುತ್ತಿವೆ. ನಿರುದ್ಯೋಗ, ಮೂಲ ಸೌಕರ್ಯ, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ಸಮಸ್ಯೆ, ಗ್ರಾಮೀಣ ಜನರ ವಲಸೆ, ಕೂಲಿಕಾರರ ಕೊರತೆ, ಲಾಭದಾಯಕವಲ್ಲದ ಕೃಷಿ, ಕೆರೆ ಕಟ್ಟೆಗಳ ಒತ್ತುವರಿ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತವಾಗಬೇಕು. ಇದು ಕೇವಲ ಭಾಷಣಕ್ಕೆ ಸೀಮಿತವಾಗಬಾರದು ಎಂದರು.

ಸಮ್ಮೇಳನ ಉದ್ಘಾಟಿಸಿದ ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಮಾತನಾಡಿ, ಇಂದು ಪ್ರತಿಭಟನೆ ದನಿಗಳು ಅಡಗಿ ಹೋಗುತ್ತಿವೆ. ನಾವು ಸತ್ತಂತೆ ಬದುಕುತ್ತಿದ್ದೇವೆ. ಆರೋಗ್ಯಕರವಾದ ಪ್ರತಿಭಟನೆ ಮಾಡುವುದು ಎಲ್ಲರ ಧ್ಯೇಯವಾಗಬೇಕು. ಯುವ ಸಾಹಿತಿಗಳು ಪ್ರತಿಭಟನಾತ್ಮಕ ಕಾವ್ಯ ರಚಿಸಬೇಕು. ಸಮಕಾಲೀನ ಸಮಸ್ಯೆಗಳಿಗೆ ಮಿಡಿಯುವ ಚಿಂತನೆ ನಡೆಯಬೇಕು. ಇಂದಿನ ಕಾಲಕ್ಕೆ ಎಂತಹ ಸಾಹಿತ್ಯ ರಚನೆಯಾಗಬೇಕು ಎನ್ನುವ ಗಂಭೀರ ಚಿಂತನೆ ನಡೆಸಬೇಕು ಎಂದರು.

ಹಿರಿಯ ಪತ್ರಕರ್ತ ಸು.ತ ರಾಮೇಗೌಡ ಮಾತನಾಡಿ, ಪ್ರತಿ ಗ್ರಾಮಗಳಲ್ಲಿಯೂ ಗ್ರಾಮಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು. ಜತೆಗೆ ಕಸಾಪ ಸಾಹಿತಿಗಳ ಪುಸ್ತಕ ಖರೀದಿಸಿ ಸಮ್ಮೇಳನಗಳಲ್ಲಿ ಉಚಿತವಾಗಿ ಹಂಚುವ ಕೆಲಸ ಮಾಡಬೇಕು. ಇದರಿಂದ ಸಾಹಿತಿಗಳ ಪ್ರೋತ್ಸಾಹ ಸಾಧ್ಯವಾಗುತ್ತದೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬೋಜೇಗೌಡ, ಸಾಹಿತಿ ಚಿಕ್ಕಚನ್ನಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು. ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ರಾಮಣ್ಣ, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಚಲುವರಾಜು, ರಾಮನಗರ ತಾಲ್ಲೂಕು ಕಸಾಪ ಅಧ್ಯಕ್ಷ ದಿನೇಶ್ ಬಿಳಗುಂಬ, ಕನಕಪುರ ತಾಲ್ಲೂಕು ಘಟಕದ ಅಧ್ಯಕ್ಷ ಶಿವಲಿಂಗಯ್ಯ, ಮುಖಂಡ ಎ.ಸಿ.ವೀರೇಗೌಡ ಭಾವಹಿಸಿದ್ದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ರಾಂಪುರ ಸ್ವಾಗತಿಸಿದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಸಿ.ರಾಜಶೇಖರ್ ನಿರೂಪಿಸಿದರು. ಇದೇ ವೇಳೆ ಸಾಹಿತಿ ಎಲೆಕೇರಿ ಶಿವರಾಂ ಅವರ ಹಗೆ ನಾಟಕ ಕೃತಿ ಬಿಡುಗಡೆ ಮಾಡಲಾಯಿತು.

ಇದಕ್ಕೂ ಮೊದಲು ನಗರದ ಗಾಂಧಿಭವನ ಬಳಿಯ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಿತ್ರಕಲಾ ಪರಿಷತ್ ಆಯುಕ್ತ ರುದ್ರಪ್ಪ ಚಾಲನೆ ನೀಡಿದರು. ಜಾನಪದ ಕಲಾತಂಡಗಳು ಹಾಗೂ ಮಹಿಳೆಯರ ಪೂರ್ಣಕುಂಭದೊಂದಿಗೆ ಸಮ್ಮೇಳನಾಧ್ಯಕ್ಷರನ್ನು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ನಂತರ ಟಿ.ಕೆ.ರಾಮರಾವ್ ಪ್ರವೇಶದ್ವಾರ ಮೂಲಕ ಮುಖ್ಯವೇದಿಕೆಗೆ ಕರೆತರಲಾಯಿತು.

ಸಮ್ಮೇಳನದ ಪ್ರಮುಖ ನಿರ್ಣಯಗಳು

6ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರು ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು.

ಮೊದಲನೆಯ ನಿರ್ಣಯ: ಕನ್ನಡ ಭಾಷೆ ಶಾಸ್ತ್ರೀಯ ಭಾಷೆಯಾಗಿ ಘೋಷಿಸಿರುವುದು ಸರಿಯಷ್ಟೇ. ಆದರೆ, ಕನ್ನಡದಂತೆ ಇತರ ಶಾಸ್ತ್ರೀಯ ಭಾಷೆಗಳೆಂದು ಹೇಳಲಾದ ಸಂಸ್ಕೃತ, ತಮಿಳು ಭಾಷೆಗಳಿಗೆ ನೀಡಲಾಗುತ್ತಿರುವ ಅನುದಾನದ ಪ್ರಮಾಣದಷ್ಟು ಕನ್ನಡದ ಭಾಷೆಗೆ ನೀಡದೆ ಕಡಿಮೆ ಅನುದಾನ ನೀಡುತ್ತಿರುವುದು ಕೇಂದ್ರ ಸರ್ಕಾರದ ತಾರತಮ್ಯ ನೀತಿಯಾಗಿದೆ. ಇದನ್ನು ವಿರೋಧಿಸುತ್ತಾ ಇಂತಹ ತಾರತಮ್ಯ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸದೆ ಕನ್ನಡಕ್ಕೂ ಸರಿಯಾದ ಪ್ರಮಾಣದಲ್ಲಿ ಅನುದಾನ ಬಿಡುಗಡೆಗೊಳಿಸುವ ಕ್ರಮ ವಹಿಸಬೇಕು.

ಎರಡನೆಯ ನಿರ್ಣಯ: ಕನ್ನಡ ಭಾಷೆ ರಾಜ್ಯದ ಎಲ್ಲ ಶಾಲೆಗಳಲ್ಲೂ (ಕನ್ನಡ, ಆಂಗ್ಲ, ಉರ್ದು, ತಮಿಳು ಇತ್ಯಾದಿ) ಒಂದು ಭಾಷೆಯಾಗಿ ಕಡ್ಡಾಯ ವಾಗಿ ಕಲಿಸುವ ಕಾನೂನು ಸರ್ಕಾರ ಜಾರಿಗೊಳಿಸಬೇಕು.

ಮೂರನೆಯ ನಿರ್ಣಯ: ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಈ ಸಭೆ ಮೂಲಕ ಒತ್ತಾಯಿಸಲಾಯಿತು.

ಸಾಹಿತ್ಯ ಲೋಕಕ್ಕೆ ಅಪಮಾನ

ಕನ್ನಡದ ಪ್ರಮುಖ ಸಾಹಿತಿಯೊಬ್ಬರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ನನಗೆ ಪದ್ಮಭೂಷಣ ಪ್ರಶಸ್ತಿ ದೊರೆತಿದೆ ಎಂದು ಹೇಳುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅವಮಾನ ಮಾಡಿದ್ದಾರೆ. ರಾಜಕಾರಣಿಗಳನ್ನು ಓಲೈಸಿಕೊಂಡರೆ ಅಥವಾ ರಾಜಕಾರಣಿಗಳಿಂದ ಪ್ರಶಸ್ತಿ ದೊರೆಯುತ್ತವೆ ಎನ್ನುವುದಾದರೆ ಸಾಹಿತ್ಯ ಏಕೆ ರಚಿಸಬೇಕು. ನಮ್ಮ ವ್ಯಕ್ತಿತ್ವವನ್ನು ಮಾರಿಕೊಂಡು ನಾವು ಬದುಕುತ್ತಿದ್ದೇವೆಯೇ.

  • ಡಾ.ಚಕ್ಕೆರೆ ಶಿವಶಂಕರ್, ಜಾನಪದ ವಿದ್ವಾಂಸ

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *