ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಭರವಸೆಗಳು ಎಎಪಿ ನಕಲು : ಮುಖ್ಯಮಂತ್ರಿ ಚಂದ್ರು
ಚನ್ನಪಟ್ಟಣದಿಂದ ಶರಶ್ಚಂದ್ರ, ರಾಮನಗರದಿಂದ ನಂಜಪ್ಪ ಕಾಳೇಗೌಡ, ಮಾಗಡಿಯಿಂದ ರವಿಕಿರಣ್ ಹಾಗೂ ಕನಕಪುರದಿಂದ ಪುಟ್ಟರಾಜು ಸ್ಪರ್ಧೆ ಮಾಡಲಿದ್ದಾರೆ.
ರಾಮನಗರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದು, ಮೂರು ಪ್ರಮುಖ ಪಕ್ಷಗಳಿಗೆ ಸಡ್ಡು ಹೊಡೆದು ನಿಲ್ಲಲಿದೆ ಎಂದು ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಇಲ್ಲಿನ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಒಂಬತ್ತು ರಾಷ್ಟ್ರೀಯ ಪಕ್ಷಗಳಿದ್ದು, ಅದರಲ್ಲಿ ಆಮ್ ಆದ್ಮಿ ಸಹ ಒಂದು. ನಮಗೆ ಚಿಹ್ನೆ ನೀಡಲು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗವು ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಛಿದ್ರವಾಗಿದ್ದು, ತನ್ನ ಸಾಮರ್ಥ್ಯ ಕಳೆದುಕೊಂಡಿದೆ. ಬಿಜೆಪಿ ಸಂವಿಧಾನ ವಿರೋಧಿ, ಕೋಮು ಆಡಳಿತದ ಮೂಲಕ ಕುಖ್ಯಾತಿ ಪಡೆದಿದೆ. ದೆಹಲಿಯಲ್ಲಿ ನಮ್ಮ ಪಕ್ಷದ ಮೇಲಿನ ಕುತಂತ್ರದಿಂದ ಇಬ್ಬರು ಮಂತ್ರಿಗಳು ಜೈಲು ಸೇರಿದ್ದಾರೆ. ಆದರೆ ಕರ್ನಾಟಕದಲ್ಲಿ ಶಾಸಕರ ಮನೆಯಲ್ಲಿ 8 ಕೋಟಿ ಸಿಕ್ಕರೂ ಬಂಧಿಸಿಲ್ಲ. ಬಿಜೆಪಿಯ ಸಿದ್ಧಾಂತ ಏನು ಎಂದರು.
ಕೇಂದ್ರವು ಸ್ವಾಯತ್ತ ಸಂಸ್ಥೆಗಳನ್ನು ತನ್ನ ಕೈಗೊಂಬೆ ಮಾಡಿಕೊಂಡಿದೆ. 2015ರಲ್ಲಿ ರಾಜ್ಯ ಸರ್ಕಾರ ಎಸಿಬಿ ತಂದು ಲೋಕಾಯುಕ್ತಕ್ಕೆ ಮೊಳೆ ಹೊಡೆಯಿತು. ನಂತರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಪ್ರಯೋಜನ ಆಗಲಿಲ್ಲ. ಹೈಕೋರ್ಟ್ ಛೀಮಾರಿ ನಂತರ ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ನೀಡಿದೆ. ಲೋಕಾಯುಕ್ತದಲ್ಲಿ ಜನಪ್ರತಿನಿಧಿಗಳ ವಿರುದ್ಧ 52 ಪ್ರಕರಣ ಇದ್ದು, ಎಲ್ಲಕ್ಕೂ ಬಿ ರಿಪೋರ್ಟ್ ಹಾಕಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ’ ಎಂದು ದೂರಿದರು.
ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಭರವಸೆಗಳು ಎಎಪಿ ನಕಲು. ಉಚಿತ ವಿದ್ಯುತ್ ಮೊದಲಾದ ಯೋಜನೆಗಳನ್ನು ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಬಿಜೆಪಿಯಲ್ಲಿ 2,500 ಕೋಟಿ ಇದ್ದರೆ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಎಂಬುದು ಜಗಜ್ಜಾಹೀರು ಆಗಿದೆ. ಜೆಡಿಎಸ್ ನದ್ದು ಊಸರವಳ್ಳಿ ರಾಜಕಾರಣ. ಅಲ್ಲಿ ಕೇವಲ ಕುಟುಂಬಕ್ಕೆ ಆದ್ಯತೆ’ ಎಂದು ಟೀಕಿಸಿದರು.
ನಾನು ಸಿನಿಮಾದಲ್ಲಿ ಅತ್ಯಾಚಾರ ಮಾಡಿದ್ದಕ್ಕೆ ಈಚೆಗೆ ಒಬ್ಬ ಮಹಿಳೆ ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಿರುವಾಗ ಮೂರು ಪಕ್ಷಗಳಲ್ಲೂ ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು ತುಂಬಿದ್ದಾರೆ. ಜನ ಪೊರಕೆ ಹಿಡಿದು ಅವರನ್ನೆಲ್ಲ ಗುಡಿಸುವ ಕಾಲ ಬಂದಿದೆ ಎಂದು ಅವರು ಹೇಳಿದರು.
ಚನ್ನಪಟ್ಟಣದಿಂದ ಶರಶ್ಚಂದ್ರ, ರಾಮನಗರದಿಂದ ನಂಜಪ್ಪ ಕಾಳೇಗೌಡ, ಮಾಗಡಿಯಿಂದ ರವಿಕಿರಣ್ ಹಾಗೂ ಕನಕಪುರದಿಂದ ಪುಟ್ಟರಾಜು ಸ್ಪರ್ಧೆ ಮಾಡಲಿದ್ದಾರೆ. ಕೆಲವೇ ದಿನದಲ್ಲಿ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಲಾಯಿತು. ಪಕ್ಷದ ರಾಜ್ಯ ಉಪಾಧ್ಯಕ್ಷ ಚನ್ನಪ್ಪ ನಲ್ಲೂರು, ಜಿಲ್ಲಾ ಅಧ್ಯಕ್ಷ ನಾಗೇಂದ್ರ ಗೌಡ, ವಿವಿಧ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳಾದ ಶರತ್ಚಂದ್ರ, ನಂಜಪ್ಪ ಕಾಳೇಗೌಡ, ರವಿಕಿರಣ್ ಹಾಗೂ ಪುಟ್ಟರಾಜು ಇದ್ದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :