ಪ್ರೋತ್ಸಾಹ ಧನಕ್ಕಾಗಿ ಎದುರು ನೋಡುತ್ತಿರುವ ಹೈನುಗಾರರು : ಯುಗಾದಿ ಹಬ್ಬ ಆಚರಿಸಲು ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಹೈನುಗಾರರ ಮನವಿ
- ಎಸ್. ರುದ್ರೇಶ್ವರ
ರಾಮನಗರ : ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಹಾಲಿನ ಪ್ರೋತ್ಸಾಹ ಧನ ಕಳೆದ ನಾಲ್ಕು ತಿಂಗಳಿನಿಂದಲೂ ಹೈನುಗಾರರ ಕೈ ಸೇರಿಲ್ಲ. ಹೀಗಾಗಿ ರಾಜ್ಯ ಸರಕಾರ ಪ್ರತಿ ಲೀಟರ್ ಹಾಲಿಗೆ ನೀಡಬೇಕಿದ್ದ 5 ರೂ. ಪ್ರೋತ್ಸಾಹ ಧನಕ್ಕಾಗಿ ಹೈನುಗಾರರು ಎದುರು ನೋಡುತ್ತಿದ್ದಾರೆ.
ಅಕಾಲಿಕ ಮಳೆಯಿಂದ ತತ್ತರಿಸಿರುವ ಜಿಲ್ಲೆಯ ಬಹುತೇಕ ರೈತರಿಗೆ ಹೈನುಗಾರಿಕೆಯೇ ಜೀವನಕ್ಕೆ ಆಧಾರವಾಗಿದೆ. ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿ ಕಂಗಾಲಾಗಿರುವ ಇವರಿಗೆ ಹೈನೋದ್ಯಮ ಕೈ ಹಿಡಿದಿದೆ. ಹಾಲು ಉತ್ಪಾದಕರಿಗೆ ನೆರವಾಗಲೆಂದು ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನ ನೀಡುವ ಸರ್ಕಾರ, ಕಾಲಕಾಲಕ್ಕೆ ಈ ಸೌಲಭ್ಯ ದೊರಕಿಸುವಲ್ಲಿ ವಿಳಂಬ ಮಾಡುತ್ತಲಿದೆ. ಹೀಗಾಗಿ ಹೈನುಗಾರರು ರಾಸುಗಳ ನಿರ್ವಹಣೆಗೆ ಪರದಾಡುತ್ತಿದ್ದಾರೆ.
ಜಿಲ್ಲೆಯ ಹೈನುಗಾರರಿಗೆ ಅಕ್ಟೋಬರ್ ತಿಂಗಳವರೆಗೂ ಪ್ರೋತ್ಸಾಹಧನ ವಿತರಣೆಯಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದಲ್ಲೂ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ. ಪ್ರತಿ ಲೀಟರ್ ಹಾಲಿಗೆ 5 ರೂ.ಗಳಂತೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿತ್ತು.
ಹಾಲಿನ ಡೇರಿಗಳಿಂದ ಪ್ರತಿ ಲೀಟರ್ ಹಾಲಿಗೆ ಕೇವಲ 30 ರೂ.ಗಳನ್ನು ಮಾತ್ರವೇ ಹೈನುಗಾರರಿಗೆ ನೀಡಲಾಗುತ್ತಿದೆ. ರಾಜ್ಯ ಸರಕಾರ ಇದಕ್ಕೆ 5 ರೂ. ಸೇರಿಸಿ ಒಟ್ಟು 35 ರೂ. ನೀಡಬೇಕಿದೆ. ಆದರೆ, ಕಳೆದ ನಾಲ್ಕು ತಿಂಗಳಿನಿಂದಲೂ ಲೀಟರ್ ಹಾಲಿಗೆ 30 ರೂ. ಪಡೆಯುತ್ತಿರುವ ಹೈನುಗಾರರು ರಾಸುಗಳ ನಿರ್ವಹಣೆಗೂ ಕೈ ಸಾಲ ಮಾಡಬೇಕಿರುವ ಅನಿವಾರ‍್ಯತೆಯನ್ನು ರಾಜ್ಯ ಸರ್ಕಾರವೇ ಸೃಷ್ಟಿಸಿದೆ.
ಅಕಾಲಿಕ ಮಳೆಯಿಂದ ಕಂಗಾಲಾಗಿರುವುದು ಒಂದೆಡೆಯಾದರೆ, ಮೇವು, ಕುಡಿವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ಸಂದಿಗ್ಧತೆ ನಡುವೆ ಮೇವು, ನೀರು ಹೊಂದಿಸಿಕೊಂಡು ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಪ್ರೋತ್ಸಾಹಧನ ವಿಷಯದಲ್ಲೂ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ನಾಲ್ಕು ತಿಂಗಳಿನಿಂದ ರೈತರ ಕೈ ಸೇರಬೇಕಿರುವ ಪ್ರೋತ್ಸಾಹ ಧನ ರೈತರ ಕೈ ಸೇರಿಲ್ಲ. ಹೀಗಾಗಿ ಬಹುತೇಕರು ಹೈನುಗಾರಿಕೆಯಿಂದಲೂ ವಿಮುಖರಾಗಲು ಮುಂದಾಗಿದ್ದಾರೆ.
ಇನ್ನೊಂದೆಡೆ ರಾಸುಗಳಿಗೆ ಕಾಡುವ ರೋಗ, ಇತ್ತೀಚೆಗೆ ಹೆಚ್ಚಾಗಿರುವ ಚರ್ಮಗಂಟು ರೋಗ, ಕೆಚ್ಚಲುಬಾವುಗಳಿಂದಾಗಿ ಹೈನುಗಾರರು ಪರದಾಡುತ್ತಿದ್ದಾರೆ. ಇದರೊಂದಿಗೆ ರಾಸುಗಳಿಗೆ ನೀಡುವ ಆಹಾರದ ಬೆಲೆಗಳು ಸಹ ಗಗನಮುಖಿಯಾಗಿದೆ. ಹೀಗಿರುವಾಗ ಹೈನುಗಾರರಿಗೆ ಸೇರಬೇಕಿರುವ ಪ್ರೋತ್ಸಾಹಧನವು ರೈತರ ಕೈ ಸೇರದಿವುದು ಅಸಮಾಧಾನಕ್ಕೆ ಕಾರಣವಾಗಿದೆ.
ವಿಳಂಬಕ್ಕೆ ಕಾರಣ ಏನು: ಅನುದಾನಗಳು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡುವ ನಿಟ್ಟಿನಲ್ಲಿ ಡಿಬಿಟಿ(ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್) ವ್ಯವಸ್ಥೆಯನ್ನು ಸರಕಾರ ಜಾರಿಗೊಳಿಸುತ್ತಿದೆ. ಹಾಗಾಗಿ ಪ್ರೋತ್ಸಾಹಧನ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಇನ್ನೊಂದೆಡೆ ರಾಜ್ಯ ಸರ್ಕಾರದಲ್ಲಿ ಅನುದಾನಗಳ ಕೊರತೆ ಎದುರಾಗಿದ್ದು, ಖಜಾನೆ ಬರಿದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಲಿನ ಡೇರಿಗಳು ಪ್ರತಿ 15 ದಿನಗಳಿಗೊಮ್ಮೆ ಹೈನುಗಾರರಿಗೆ ಹಣ ನೀಡುವಂತೆ ಪ್ರೋತ್ಸಾಹ ಧನವು ಸಹ 15 ದಿನಗಳಿಗೊಮ್ಮೆ ತಮ್ಮ ಖಾತೆಗಳಿಗೆ ಜಮೆ ಆಗಬೇಕು ಎಂಬುದು ಹೈನುಗಾರರ ಒತ್ತಾಯವಾಗಿದೆ.
ಹಾಲಿಗೆ ಪ್ರೋತ್ಸಾಹಧನ ನೀಡುವಲ್ಲಿ ಸರಕಾರದ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದು ಹೀಗೆಯೇ ಮುಂದುವರಿದರೆ ಕಷ್ಟ. ಡೇರಿಗಳಲ್ಲಿ ನೀಡುವ 30 ರೂ. ಗಳಿಂದಾಗಿ ಹೈನುಗಾರರಿಗೆ ಯಾವುದೇ ಲಾಭವಾಗುವುದಿಲ್ಲ. ಇಷ್ಟ ಬಂದಾಗ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿದೆ. ಅದು ಯಾವ ತಿಂಗಳ ಹಣ ಎಂಬ ಬಗ್ಗೆಯು ಮಾಹಿತಿ ನೀಡುವುದಿಲ್ಲ. ಸರ್ಕಾರ ಹಾಕಿದಾಗಲೇ ಹಣ ಬಂದಿದೆ ಎಂದು ನಿಟ್ಟೂಸಿರು ಬಿಡಬೇಕು ಎಂದು ದೊಡ್ಡಗಂಗವಾಡಿ ಗ್ರಾಮದ ಗೋಪಾಲಕೃಷ್ಣ ತಿಳಿಸಿದರು.
ಇನ್ನು ಕೆಲವೆ ದಿನಗಳಲ್ಲಿ ಯುಗಾದಿ ಹಬ್ಬ ಬರಲಿದೆ. ಸರ್ಕಾರ ಈಗಲಾದರೂ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು. ಸರ್ಕಾರ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿದರೆ ರೈತರು ಸಂತೋಷದಿಂದ ‘ಯುಗಾದಿ’ ಹಬ್ಬವನ್ನು ಆಚರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
https://chat.whatsapp.com/IY8d8seeQSCIZewIP8uKdh
‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :