ರಾಮನಗರ ಉಪವಿಭಾಗಾಧಿಕಾರಿ ಸಿ. ಮಂಜುನಾಥ್ ಅಮಾನತು
ರಾಮನಗರ : ಆದಾಯಕ್ಕಿಂತ ಶೇ 141ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಉಪ ವಿಭಾಗಾಧಿಕಾರಿ ಸಿ. ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಮಂಜುನಾಥ್ 4.69 ಕೋಟಿ ಮೊತ್ತದ ಸ್ಥಿರಾಸ್ತಿ ಮತ್ತು ಚರಾಸ್ತಿ ಹೊಂದಿದ್ದು, 71 ಲಕ್ಷ ಖರ್ಚು ಮಾಡಿದ್ದಾರೆ. ಅವರ ಒಟ್ಟು ಆದಾಯ 2.23 ಕೋಟಿ ಇದ್ದು, ಆದಾಯಕ್ಕಿಂತ 3.17 ಕೋಟಿ ಮೊತ್ತದ ಅಧಿಕ ಆಸ್ತಿ ಹೊಂದಿದ್ದಾರೆ. ಶೇ 141.90ರಷ್ಟು ಅಧಿಕ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಸರ್ಕಾರ ಇದೇ 17ರಂದು ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ವರ್ಷದ ಹಿಂದೆ ದಾಳಿ: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು 2022ರ ಮಾರ್ಚ್ 16ರಂದು ಕೆಎಎಸ್ ಅಧಿಕಾರಿ ಮಂಜುನಾಥ್ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು.
ದಾಳಿ ಸಂದರ್ಭದಲ್ಲಿ ಅನೇಕ ದಾಖಲೆ ವಶಪಡಿಸಿಕೊಳ್ಳಲಾಗಿತ್ತು. ಅದರ ಅನುಸಾರ ಅಧಿಕಾರಿಯು ತನ್ನ ಗಳಿಕೆಗಿಂತ 6.45 ಕೋಟಿಯಷ್ಟು ಹೆಚ್ಚುವರಿ ಆಸ್ತಿ ಹೊಂದಿದ್ದು, ಶೇ 216ರಷ್ಟು ಅಕ್ರಮ ಆಸ್ತಿ ಸಂಪಾದಿಸಿರುವುದಾಗಿ ಆರೋಪಿಸಿ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ಬೆಂಗಳೂರು ನಗರ, ರಾಮನಗರ, ದೊಡ್ಡಬಳ್ಳಾಪುರ ಮೊದಲಾದ ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿತ್ತು. ಬೆಂಗಳೂರಿನ ಬ್ಯಾಟರಾಯನಪುರದಲ್ಲಿ 4 ಅಂತಸ್ತಿನ ಒಂದು ಮನೆ, ಸುಗ್ಗಘಟ್ಟದಲ್ಲಿ 2 ನಿವೇಶನ, ಯಲಹಂಕ ಹೋಬಳಿಯ ಬ್ಯಾಟರಾಯನಪುರದಲ್ಲಿ 7 ಬ್ಯಾಡ್ಮಿಂಟನ್ ಕೋರ್ಟ್‌ಗಳಿರುವ ವಾಣಿಜ್ಯ ಉದ್ದೇಶದ ಆಟದ ಮೈದಾನ, ಯಲಹಂಕ ತಾಲ್ಲೂಕಿನ ಹೆಸರುಘಟ್ಟ ಹೋಬಳಿಯ ಕಕ್ಕೇಹಳ್ಳಿಯಲ್ಲಿ ಫಾರ್ಮ್ ಹೌಸ್, 16 ಗುಂಟೆ ಜಮೀನು, ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಳೂರು ಗ್ರಾಮದಲ್ಲಿ ಒಂದು ಎಕರೆ 29 ಗುಂಟೆ ಕೃಷಿ ಜಮೀನಿನ ಆಸ್ತಿ ದಾಖಲೆಗಳು ಅಧಿಕಾರಿಗಳಿಗೆ ದೊರೆತಿದ್ದವು.
ಇದಲ್ಲದೆ, ಒಟ್ಟು 710 ಗ್ರಾಂ ಚಿನ್ನಾಭರಣ, 3.5 ಕೆ.ಜಿ. ಬೆಳ್ಳಿ ಸಾಮಗ್ರಿ, ಐದು ಕಾರು, ಮೂರು ದ್ವಿಚಕ್ರ ವಾಹನ, ₹19 ಲಕ್ಷ ನಗದು ದಾಳಿ ವೇಳೆ ದೊರೆತಿದ್ದು, ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 60 ಲಕ್ಷ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದರು.
ವರ್ಷವಾದರೂ ವರ್ಗಾವಣೆ ಇಲ್ಲ :
ಕಳೆದ ವರ್ಷ ಮಾರ್ಚ್ 16ರಂದು ಮಂಜುನಾಥ್ ವಿರುದ್ಧ ಎಸಿಬಿ ದಾಳಿ ನಡೆದಿದ್ದು, ಅದೇ ತಿಂಗಳ 19ರಂದೇ ತನಿಖಾಧಿಕಾರಿಗಳು ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಅಧಿಕಾರಿ ಪ್ರಭಾವಿ ಹುದ್ದೆಯಲ್ಲಿದ್ದು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ಆ ಹುದ್ದೆಯಿಂದ ಬೇರೆಡೆಗೆ ವರ್ಗಾಯಿಸಬೇಕು ಎಂದು ಕೋರಿದ್ದರು. ಆದಾಗ್ಯೂ ಸರ್ಕಾರವು ಒಂದು ವರ್ಷ ಕಾಲ ಅದೇ ಹುದ್ದೆಯಲ್ಲಿ ಅವರನ್ನು ಮುಂದುವರಿಸಿತ್ತು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
https://chat.whatsapp.com/IY8d8seeQSCIZewIP8uKdh
‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :