ರಾಮನಗರದಲ್ಲಿ ನಾಳೆ (ಮಾರ್ಚ್ 31) ಶ್ರೀರಾಮದೇವರ ರಥೋತ್ಸವ
-ಎಸ್. ರುದ್ರೇಶ್ವರ
ರಾಮನಗರ : ನಗರದಲ್ಲಿ ಮಾರ್ಚ್ 31ರಂದು ನಡೆಯಲಿರುವ ಶ್ರೀರಾಮ ರಥೋತ್ಸವಕ್ಕೆ ವಿಜೃಂಬಣೆಯಿಂದ ನಡೆಯಲಿದೆ.
ರಾಮದೇವರಬೆಟ್ಟದಲ್ಲಿ ನೆಲಸಿರುವ ಶ್ರಿರಾಮದೇವರಿಗೆ ಇಲ್ಲಿನ ಛತ್ರದ ಬೀದಿಯಲ್ಲಿ ಪ್ರತಿ ವರ್ಷದ ಪದ್ಧತಿಯ ಪ್ರಕಾರ ಶೋಭಕೃತ ನಾಮ ಸಂವತ್ಸರದ ಚೈತ್ರ ಶುದ್ದ ದಶಮಿ ಶುಕ್ರವಾರದಂದು ಬೆಳಿಗ್ಗೆ 8.20 ರಿಂದ 9.10 ಗಂಟೆಯೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಮಹಾ ರಥೋತ್ಸವ ನಡೆಯಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಎ. ನರಸಿಂಹಭಟ್ಟ ‘ಸಂಜೆ ಎಕ್ಸ್ ಪ್ರೆಸ್’ ಗೆ ತಿಳಿಸಿದರು.
ಪಾಂಚರಾತ್ರೋಕ್ತ ಆಗಮಾನುಸಾರವಾಗಿ ಮಾರ್ಚ್ 22 ರಿಂದ ಮೇ 25 ರವರೆಗೆ ನವಾಹೋತ್ಸವ ಪೂರ್ವಕ ಶ್ರೀ ಸ್ವಾಮಿಯವರ ಸೇವಾ ಕೈಂಕರ್ಯಗಳು ನಡೆಯಲಿವೆ. ಶ್ರೀರಾಮ ರಥೋತ್ಸವಕ್ಕೆ 500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ರಾಮದೇವರ ಬೆಟ್ಟದಲ್ಲಿ ಕಳೆದ 55 ವರ್ಷಗಳ ಹಿಂದೆ ವಿಗ್ರಹಗಳ ಕಳ್ಳತನವಾದ್ದರಿಂದ ನಗರದಲ್ಲಿ 1971ರಲ್ಲಿ ಶ್ರೀರಾಮ ದೇವಾಲಯವನ್ನು ಸ್ಥಾಪಿಸಲಾಯಿತು ಎಂದು ತಿಳಿಸಿದರು.
ರಥವು 36 ಅಡಿ ಎತ್ತರವಿದೆ. ನಾನಾ ಜಿಲ್ಲೆಗಳಿಂದ ರಥೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ರಥಕ್ಕೆ ಜವನ ಮತ್ತು ಬಾಳೆ ಹಣ್ಣು ಎಸೆದು ಹರಕೆ ತೀರಿಸಿಕೊಳ್ಳಲಿದ್ದಾರೆ. ರಾಮನಗರದಲ್ಲಿ ಪ್ರತಿ ವರ್ಷ ಶ್ರೀರಾಮ ನವಮಿಯ ಮರುದಿನ ಶ್ರೀರಾಮ ರಥೋತ್ಸವ ಮತ್ತು ಜಾತ್ರೆ ವಿಜೃಂಬಣೆಯಿಂದ ನಡೆಯುತ್ತದೆ ಎಂದು ಅವರು ಹೇಳಿದರು.
ರಾಮಾನುಜಚಾರ್ಯರು ಪ್ರತಿಷ್ಠಾಪಿಸಿದ ಮೂರ್ತಿ : ರಾಮದೇವರ ಬೆಟ್ಟದಲ್ಲಿ ರಾಮಾನುಜ ಚಾರ್ಯರು ರಾಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಇಲ್ಲಿಗೆ ರೇವಣಸಿದ್ದೇಶ್ವರರು ಭೇಟಿ ನೀಡಿದ್ದರು. ಈ ಪ್ರದೇಶವನ್ನು ಗಂಗರು, ರಾಷ್ಟ್ರಕೂಟರು, ಹೊಯ್ಸಳರು, ಚೋಳರು, ವಿಜಯನಗರದ ಅರಸರು ಆಳ್ವಿಕೆ ಮಾಡಿದ್ದಾರೆ. 1537ರಲ್ಲಿ ಹಿರಿಯ ಕೆಂಪೇಗೌಡ ಬೆಂಗಳೂರು ನಿರ್ಮಾಣಕ್ಕೆ ಮುಂದಾಗುತ್ತಾನೆ. ರಾಮದೇವರ ಬೆಟ್ಟದಲ್ಲಿ ಈತನಿಗೆ ನಿಧಿ ದೊರೆಯುತ್ತದೆ. ಇದನ್ನು ಬೆಂಗಳೂರು ಅಭಿವೃದ್ಧಿಗಾಗಿ ಬಳಸುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ಬೆಟ್ಟದಲ್ಲಿ ಶಾಸನಗಳಿವೆ ಎಂದು ಹಿರಿಯ ಸಂಶೋಧಕ ಡಾ.ಎಂ.ಜಿ. ನಾಗರಾಜ್ ತಿಳಿಸಿದರು.
ಹಿಂದೆ ‘ಕ್ಲೋಸ್ ಪೇಟೆ’ ಎಂದು ಕರೆಯಲ್ಪಡುತ್ತಿದ್ದ ಈ ನಗರ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಕೆಳ್ಗಲಿ ನಾಡು, ಕಿಳಲೈ ನಾಡು, ಹೊಸಪೇಟೆ, ನವೀನಪೇಟೆ, ರಾಮಗಿರಿ, ರಾಮದುರ್ಗ ಮೊದಲಾದ ಹಲವು ಹೆಸರುಗಳಿಂದ ಗುರುತಿಸಲ್ಪಟ್ಟಿತ್ತು. ರಾಮದೇವರ ಬೆಟ್ಟದಲ್ಲಿ ಶ್ರೀರಾಮನು ಸೀತೆ-ಲಕ್ಷ್ಮಣರೊಡನೆ ವನವಾಸ ಕಾಲದಲ್ಲಿ ನೆಲೆಸಿದ್ದನೆಂದು ಪ್ರತೀತಿಯಿದೆ. ಈ ಪ್ರತೀತಿಯೇ ಕ್ಲೋಸ್ ಪೇಟೆಯು ‘ರಾಮನಗರ’ ಎಂದು ಮರುನಾಮಕರಣ ಹೊಂದಲು ಪ್ರೇರಣೆಯಾಗಿದೆ ಎಂದರು.
ರಾಮದೇವರ ಬೆಟ್ಟದಲ್ಲಿ ಬೃಹತ್ ಶಿಲಾಯುಗದ ಸಮಾಧಿಗಳಿವೆ. ಪ್ರಾಗೈತಿಹಾಸಿಕ ಗೋರಿಗಳಿವೆ. ಹಲವು ಶಾಸನಗಳಿವೆ. ಇವುಗಳನ್ನು ಅಧ್ಯಯನ ಮಾಡಿದರೆ ರಾಮನಗರ ಜಿಲ್ಲೆಯ ಇತಿಹಾಸವನ್ನು ಪ್ರಾಗೈತಿಹಾಸಿಕ ನೆಲೆಯಲ್ಲಿ ವಿಶ್ಲೇಷಿಸಬಹುದು ಎಂದು ಅವರು ಹೇಳಿದರು.
ಶ್ರೀರಾಮದೇವರ ರಥೋತ್ಸವಕ್ಕೆ ನಾಡಿನ ಬೇರೆ ಬೇರೆ ಭಾಗಗಳಿಂದ ಜನ ಬಂದು ಸೇರುತ್ತಾರೆ. ಜಾತಿ, ಮತ, ಧರ್ಮಗಳ ಗೊಡವೆಯಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ನಗರದಲ್ಲಿ ಅಲ್ಲಲ್ಲಿ ತೆರೆಯಲಾಗುವ ಅರವಟ್ಟಿಗೆಗಳಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ಸವಿದು ಸಂಭ್ರಮಿಸುತ್ತಾರೆ. ಹಾಗಾಗಿಯೇ ಈ ಜಾತ್ರೆಗೆ ಪೌರಾಣಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ ಎಂದು ಜಾನಪದ ವಿದ್ವಾಂಸ ಡಾ. ಕುರುವ ಬಸವರಾಜ್ ತಿಳಿಸಿದರು.
ಬೇಸಿಗೆ ಬಂತಂದೆರೆ ಹಬ್ಬ ಹರಿದಿನಗಳು ಕೊಂಡ ಉತ್ಸವಗಳು ಎಲ್ಲೆಡೆ ಜರುಗುತ್ತಿರುತ್ತವೆ. ಈ ಸಮಯದಲ್ಲಿ ಜನರು ಎಲ್ಲಡೆ ಸಾಮಾನ್ಯವಾಗಿ ಬಳಸುವ ಬೇಲದ ಹಣ್ಣಿನ ಪಾನಕ ಕೋಸಂಬರಿ ಪಾಯಿಸ ಮಜ್ಜಿಗೆಯನ್ನು ಹೆಚ್ಚಾಗಿ ಬಳಸುವ ಪದ್ದತಿ ಅವರ ಆರೋಗ್ಯದ ಗುಟ್ಟುಗಳಲ್ಲಿ ಒಂದು ಎಂದು ತಿಳಿಸಿದರು.
ಬೇಸಿಗೆಯ ತಾಪಕ್ಕೆ ಸಕ್ಕರೆ ಪ್ರಮಾಣದ ಸಮತೋಲನಕ್ಕಾಗಿ ಪಾನಕ ಪಾಯಿಸ ಉತ್ತಮ ಪೇಯ. ಹಸಿವು ಬಾಯಾರಿಕೆ ನೀಗಲು ಮಜ್ಜಿಗೆ ಕೋಸಂಬರಿ ಉತ್ತಮ ಆಹಾರ. ಇದರಲ್ಲಿ ಕಾರ್ಬೋಹೈಡ್ರೇಟ್ ಅಂಶಗಳು ಹೆಚ್ಚಾಗಿರುತ್ತವೆ.ಇವು ನಮ್ಮ ಜನಪದರಿಗಿದ್ದ ಆಹಾರಜ್ಞಾನವಾಗಿದೆ ತಿಳಿಸದರು.
ಐದು ದಿನಗಳ ಕಾರ್ಯಕ್ರಮ : ಏಪ್ರಿಲ್ 1 ರಿಂದ 5ರ ವರೆಗೆ ಪ್ರತಿ ದಿನ ಸಂಜೆ 5.30 ಗಂಟೆಗೆ ಭಗವನ್ನಾಮ ಸಂಕೀರ್ತನೆ, ಹರಿಕತೆ, ಭರತನಾಟ್ಯ ಹಾಗೂ ದೇವರ ನಾಮ ಕಾರ್ಯಕ್ರಮಗಳನ್ನು ಶ್ರೀ ಶಾರದಾಂಬ ದೇವಾಲಯದಲ್ಲಿ ಆಯೋಜಿಸಲಾಗಿದೆ. ಜೊತೆಗೆ ಸಾಧಕರನ್ನು ಗೌರವಿಸಲಾಗುತ್ತದೆ ಎಂದು ಶ್ರೀರಾಮೋತ್ಸವ ಸಂಕೀರ್ತನಾ ಸೇವಾ ಟ್ರಸ್ಟಿನ ಎಚ್.ವಿ. ಶೇಷಾದ್ರಿ ಐಯ್ಯರ್ ತಿಳಿಸಿದರು.
ಏಪ್ರಿಲ್ 1 ರಂದು ಸಂಜೆ 5.30 ಗಂಟೆಗೆ ಹಿರಿಯ ಕಲಾವಿದ ಸೀತರಾಮ ಮುನಿಕೋಟಿ ಅವರಿಂದ ‘ಸೀತಾ ಕಲ್ಯಾಣ ಹರಿಕತೆ, ಏಪ್ರಿಲ್ 2 ರಂದು ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಭರತನಾಟ್ಯ ಪ್ರದರ್ಶನ, ಏಪ್ರಿಲ್ 3 ರಂದು ಹಿರಿಯ ಗಾಯಕರಾದ ಬಿ.ಪಿ. ರೇಣುಕಪ್ಪ ಮತ್ತು ತಂಡದವರಿಂದ ವಚನ ಗಾಯನ, ಭಗವನ್ನಾಮ ಸಂಕೀರ್ತನೆ, ಏಪ್ರಿಲ್ 4 ರಂದು ಶ್ರೀರಾಮ ಸಂಗೀತ ವಿದ್ಯಾಲಯದ ಕಲಾವಿದರಾದ ಕಾಕೋಳು ಶೈಲೇಶ್ ಮತ್ತು ತಂಡದವರಿಂದ ಮಿಶ್ರ ಮಾಧುರ್ಯ ಭಕ್ತಿಗೀತೆಗಳ ಕಾರ್ಯಕ್ರಮ, ಏಪ್ರಿಲ್ 5 ರಂದು ಸಪ್ತ ಸ್ವರ ಸಂಗೀತ ವಿದ್ಯಾಲಯದ ಕಲಾವಿದರಿಂದ ಕರ್ನಾಟಕ ಸಂಗೀತ, ಭಕ್ತಿಗೀತೆಗಳು ಹಾಗೂ ಭಗವನ್ನಾಮ ಸಂಕೀರ್ತೆನೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
https://chat.whatsapp.com/IY8d8seeQSCIZewIP8uKdh
‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :