ವೈದ್ಯ ವೃತ್ತಿಯ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡ ಡಾ.ಕೆ.ಪಿ. ಹೆಗ್ಡೆ

ರಾಮನಗರ : ವೈದ್ಯ ವೃತ್ತಿಯ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅಪರೂಪದ ವ್ಯಕ್ತಿಗಳಲ್ಲಿ ಡಾ.ಕೆ.ಪಿ. ಹೆಗ್ಡೆ ಪ್ರಮುಖರು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್ ತಿಳಿಸಿದರು.

ಇಲ್ಲಿನ ಪ್ರಗತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಡಾ.ಕೆ.ಪಿ. ಹೆಗ್ಡೆ ಅಭಿಮಾನಿಗಳ ಬಳಗ ಹಾಗೂ ಪ್ರಗತಿ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಡಾ.ಕೆ.ಪಿ. ಹೆಗ್ಡೆ ಅವರ ಜನುಮದಿನದ ಅಂಗವಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೆಗ್ಡೆ ಅವರು ಸರ್ಕಾರದ ಸೈಪಂಡರಿ ಸ್ಕೀಂ ನಲ್ಲಿ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದರು. ಆದರೆ ಬಡವರ ಮೇಲಿನ ಕಾಳಜಿಯಿಂದ ಕೆಲಸಕ್ಕೆ ರಾಜೀನಾಮೆ ನೀಡಿ 1973ರಲ್ಲಿ ಪ್ರಗತಿ ಚಿಕಿತ್ಸಾಲಯ ಸ್ಥಾಪಿಸಿದರು ಎಂದು ತಿಳಿಸಿದರು.

ಚಿಕಿತ್ಸಾಲಯಕ್ಕೆ ಬರುವ ರೋಗಿಗಳ ಹತ್ತಿರ ಹಣ ಇರಲಿ, ಇಲ್ಲದಿರಲಿ ಇವರು ಚಿಕಿತ್ಸೆ ನೀಡುತ್ತಿದ್ದಾರೆ. ಜೊತಗೆ ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಹಣ ಕೊಡುವ ರೋಗಿಗಳಿಗೆ ಒಬ್ಬರಿಗೆ 20 ನಿಗದಿ ಪಡಿಸಿದ್ದಾರೆ. ತಮ್ಮ ಸೇವಾ ಮನೋಭಾವನೆಯಿಂದ ಇವರು ಬಡವರ ಡಾಕ್ಟರ್ ಎಂದೇ ಗುರುತಿಸಲ್ಪಟ್ಟಿದ್ದಾರೆ ಎಂದರು

ಪ್ರಗತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಆರ್.ಎಂ. ಯಾದವೇಂದ್ರ ಮಾತನಾಡಿ ವೈದ್ಯ ವೃತ್ತಿ ಇತರೆ ವೃತ್ತಿಗಳಿಗಿಂತ ಮಹತ್ವವಾದುದು. ಇವತ್ತು ವೈದ್ಯ ವೃತ್ತಿ ವ್ಯಾಪರೀಕರಣಕ್ಕೆ ಒಳಗಾಗಿದೆ. ಸೇವಾ ಮನೋಭಾವನೆ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲೂ ಸೇವೆಯನ್ನೇ ಪ್ರಮುಖ ಆಶಯವನ್ನಾಗಿ ಇಟ್ಟು ಕೊಂಡು ದುಡಿಯುತ್ತಿರುವವರಲ್ಲಿ ಡಾ.ಕೆ.ಪಿ. ಹೆಗ್ಡೆ ಪ್ರಮುಖರು ಎಂದು ತಿಳಿಸಿದರು.

ಡಾ.ಕೆ.ಪಿ. ಹೆಗ್ಡೆ ಅಭಿಮಾನಿಗಳ ಬಳಗದ ಸಂಚಾಲಕ ಎಸ್. ರುದ್ರೇಶ್ವರ ಮಾತನಾಡಿ ಹೆಗ್ಡೆ ಅವರು ವೈದ್ಯ ವೃತ್ತಿಯನ್ನು ಎಂದೂ ಕೂಡ ಹಣ ಗಳಿಕೆಗೆ ಬಳಸಿಕೊಂಡವರಲ್ಲ. ಈಗ ಖಾಸಗಿ ಆಸ್ಪತ್ರೆಗಳು ಹೆಚ್ಚಾಗುತ್ತಿವೆ. ಆದರೂ ಇವರ ಕೈ ಗುಣ ಹಾಗೂ ದುಬಾರಿ ಹಣಕ್ಕೆ ಆಸೆ ಬೀಳದ ಕಾರಣ ಜನಸಾಮಾನ್ಯರು ಇವರನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ತಿಳಿಸಿದರು.

ಶಿಕ್ಷಣ ಎನ್ನುವುದು ಇಂದು ಉದ್ಯಮವಾಗಿದೆ. ಹೆಗ್ಡೆ ಅವರು ಕನ್ನಡ ಮಾಧ್ಯಮದಲ್ಲಿ ಪ್ರಗತಿ ಶಾಲೆ ಪ್ರಾರಂಭಿಸಿ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಎಂದರು.

ಪರಿಸರವಾದಿ ಸಾಲುಮರದ ನಿಂಗಣ್ಣ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್, ನಿವೃತ್ತ ಶಿಕ್ಷಕರಾದ ಕಮಲಮ್ಮ, ಶ್ರೀನಿವಾಸ್, ನಾಗರಾಜು, ಆರ್.ಎಂ. ಯಾದವೇಂದ್ರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಗತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ಕೆ.ಪಿ. ಹೆಗ್ಡೆ, ಸದಸ್ಯ ಚಂದ್ರಶೇಖರ್, ಶಾಲೆಯ ಮುಖ್ಯಶಿಕ್ಷಕಿ ಡಿ. ದಾಕ್ಷಾಯಿಣಿ, ಶಿಕ್ಷಕರಾದ ಶೈಲಜ, ಬಸವರಾಜೇಶ್ವರಿ, ಜಯಮ್ಮ, ಲಕ್ಷ್ಮಿ, ಇ.ಎಸ್. ಶಿಲ್ಪ, ದೀಪಾ ಆರ್‌.ಎಸ್. ಸಿಂಗ್, ಯಶೋಧ, ತ್ರಿವೇಣಿ, ಸೋಮಶೇಖರ್ ಇತರರು ಇದ್ದರು.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :

https://www.facebook.com/HaiRamanagara?mibextid=ZbWKwL

Leave a Reply

Your email address will not be published. Required fields are marked *