ಜಾನಪದ ಲೋಕದಲ್ಲಿ ನಡೆಯುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಕಿನ್ನರಿ ಜೋಗಿ ಕಲಾವಿದ ಜೋಗಿತಿಪ್ಪೇಸ್ವಾಮಿ
ರಾಮನಗರ : ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಇಲ್ಲಿನ ಜಾನಪದ ಲೋಕದಲ್ಲಿ ಏಪ್ರಿಲ್ 9 ರ ಭಾನುವಾರ ಸಂಜೆ 4.30 ಗಂಟೆಗೆ ನಡೆಯುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಕಿನ್ನರಿ ಜೋಗಿ ಕಲಾವಿದರಾದ ಜೋಗಿತಿಪ್ಪೇಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಮೇನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಎಸ್.ವಿ. ಟ್ರೇಡರ್ಸ್ ಮಾಲೀಕರಾದ ಆರ್. ಚಿಕ್ಕಬೈರೇಗೌಡ ಪಾಲ್ಗೊಳ್ಳಲಿದ್ದಾರೆ.
ಕಿನ್ನರಿ ಜೋಗಿ ಕಲಾವಿದ ಜೋಗಿತಿಪ್ಪೇಸ್ವಾಮಿ ಅವರ ಪರಿಚಯ :
ಒಮ್ಮೆ ದ್ರೌಪದಿಯೊಂದಿಗೆ ಅರ್ಜುನನು ಪಂಥದ ಮೇಲೆ ಪಗಡೆಯಾಡಿದರೆ ಸೊಗಸು ಎಂದು ಪಂಥ ಕಟ್ಟುತ್ತಾರೆ. ದ್ರೌಪದಿ ಸೋತರೆ ಮಣಿಪುರದ ರಾಣಿಯರ ದಾಸಿಯಾಗುವುದಾಗಿಯೂ, ಅರ್ಜುನ ಸೋತರೆ ಹನ್ನೆರಡು ವರ್ಷ ಜೋಗಿಯಾಗಿ ದೇಶಾಂತರ ಹೋಗುವುದೆಂದು ಪಂಥ ಕಟ್ಟುತ್ತಾರೆ. ಅರ್ಜುನ ಸೋತು ಜೋಗಿಯಾಗಿ ಏಳುತಲೆ ಗುಡ್ಡದ ಮಠಕ್ಕೆ ಬಂದುಅಲ್ಲಿನ ಏಳು ಮಂದಿ ಸಿದ್ಧರ ಸೇವೆಗೆ ನಿಂತನು. ಅವರಲ್ಲಿ ನಾನು ಜೋಗಿಯಾಗುವುದಾಗಿ ಕೇಳಿಕೊಂಡನು. ಸಿದ್ಧರು ಮಾಳಾವತಿ ದೇಶದ ರಕ್ಕಸಿಯನ್ನು ಕೊಂದು ಅವಳ ದೇಹದದಿಂದ ಕಿನ್ನರಿಯನ್ನು ಮಾಡಿ ಅರ್ಜುನನಿಗೆ ಜೋಗಿ ದೀಕ್ಷೆಯನ್ನು ನೀಡಿದರು. ಅರ್ಜುನ ಸಂತತಿಯೇ ಈಗಿನ ಕಿನ್ನರಿ ಜೋಗಿಗಳು. ಆದರೆ ವಾಸ್ತವಾಗಿ ಜೋಗಿಗಳು ಭೈರವನ ಆರಾಧಕರು. ಕಿನ್ನರಿ ಜೋಗಿಗಳು ಕೇವಲ ಅರ್ಜುನಜೋಗಿ ಹಾಡಿಗೆ ಮಾತ್ರ ಸೀಮಿತವಾಗಿಲ್ಲ ಮಹಾಭಾರತದ ವಿವಿಧ ಪರ್ವಗಳನ್ನು ಅನೇಕ ರಾತ್ರಿವರೆಗೆ ಹಾಡಬಲ್ಲರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಎನ್. ದೇವರಹಳ್ಳಿಯ 68ವರ್ಷದ ಜೋಗಿತಿಪ್ಪೇಸ್ವಾಮಿಯವರು ಕಿನ್ನರಿಜೋಗಿ ಸಂಪ್ರದಾಯದ ಉತ್ಕೃಷ್ಟ ಕಲಾವಿದರು. ಶಿವ-ಪಾರ್ವತಿ, ಗಂಗೆ-ಗೌರಿ, ಮಹಾಭಾರತ ರಾಮಯಾಣದ ಕಥಾ ಪ್ರಸಂಗಗಳನ್ನು ಸೊಗಸಾಗಿ ಹಾಡುತ್ತಾರೆ ಮತ್ತು ಕುಣಿಯುತ್ತಾರೆ. ಅಪರೂಪದ ಕಲಾವಿದರಾಗಿರುವ ಇವರಿಗೆ ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿವೆ.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
https://chat.whatsapp.com/IY8d8seeQSCIZewIP8uKdh
‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :
https://www.facebook.com/HaiRamanagara?mibextid=ZbWKwL
ಟ್ವಿಟರ್ : http://twitter.com/hairamanagara